ಮೋಹೋರೋವಿಚಿಚ್ ವಿಚ್ಛಿನ್ನತೆ -
ಭೂಮಿಯ ಹೊರಹೊದಿಕೆ (ಕ್ರಸ್ಟ್) ಮತ್ತು ಮ್ಯಾಂಟಲ್ ಭೂಪ್ರದೇಶ ಭಾಗವನ್ನು ಬೇರ್ಪಡಿಸುವ ವಲಯ (ಮೋಹೋರೋವಿಚಿಚ್ ಡಿಸ್‍ಕಂಟಿನ್ಯುಯಿಟಿ). ಯೂಗೋಸ್ಲಾವಿಯದ ಭೂವಿಜ್ಞಾನಿ ಎ. ಮೋಹೋರೋವಿಚಿಚ್ (1857--1936) ಎಂಬವ ಇದನ್ನು ಅವಿಷ್ಕಾರ ಮಾಡಿದ್ದರಿಂದ ಈ ವಿಚ್ಛಿನ್ನತೆಗೆ ಇವನ ಹೆಸರೇ ಅನ್ವರ್ಥವಾಗಿದೆ. ಮೋಹೋ ಎಂಬುದು ಹ್ರಸ್ವರೂಪ.  ಖಂಡಗಳ ಕೆಳಭಾಗದಲ್ಲಿ ಸುಮಾರು 10ರಿಂದ 70ಕಿಮೀವರೆಗೂ ಸಾಗರತಳಗಳ ತಳಭಾಗದಿಂದ 6ಕಿಮೀ ಕೆಳಗೂ ವ್ಯಾಪಿಸಿದೆ. ಈ ಭೂವಿಜ್ಞಾನಿ ಭೂಕಂಪನಗಳಿಂದ ಉಂಟಾಗುವ ಧಕ್ಕಾತರಂಗಗಳ ಗತಿಯನ್ನು ಅಧ್ಯಯನ ಮಾಡುತ್ತಿದ್ದಾಗ ಈ ವಿಚ್ಛಿನ್ನತೆ ಇರುವುದನ್ನು ಗುರುತಿಸಿದ (1909).  ಧಕ್ಕಾತರಂಗಗಳು ಭೂಹೊರಹೊದಿಕೆಯ ಮೂಲಕ ಸೆಕೆಂಡಿಗೆ 6ರಿಂದ 7ಕಿಮೀ ವೇಗದಿಂದ ಚಲಿಸುತ್ತವೆ.     

	ಭೂಮಿಯ ಹೊರಹೊದಿಕೆಯ ಮೂಲಕ ಭೂವೈಜ್ಞಾನಿಕ ಅಧ್ಯಯನಗಳ ಸಲುವಾಗಿ ಮೋಹೋರೋವಿಚೆಚ್ ವಿಚ್ಛನ್ನತೆಯ ಪ್ರದೇಶದ ಕೆಳಗೆ ಒಂದು ರಂಧ್ರವನ್ನು ಕೊರೆಯಲು ಉದ್ದೇಶಿಸಲಾಗಿತ್ತು.  ಈ ರಂಧ್ರಕ್ಕೆ ಮೋಹೋಲ್ ಎಂದು ಹೆಸರಿಡಲಾಯಿತು. ಭೂಮಿಯ ಪ್ರಾವಾರದ (ಮ್ಯಾಂಟಲಿನ) ರಚನೆ, ವಿಕಿರಣಪಟುತ್ವ ಮತ್ತು ಉಷ್ಣತೆಗಳ ವಿಚಾರವಾಗಿ ಮೋಹೋಲ್ ಯೋಜನೆ ಮಾಹಿತಿ ಒದಗಿಸುವುದೆಂದು ವಿಜ್ಞಾನಿಗಳು ಬಗೆದಿದ್ದರು.  ಸಮುದ್ರದ ಮೇಲೆ ತೇಲು ವೇದಿಕೆಯನ್ನು (ಫ್ಲೋಟಿಂಗ್ ಪ್ಲ್ಯಾಟ್‍ಫಾರ್ಮ) ಏರ್ಪಡಿಸಿ ಅಲ್ಲಿಂದ ರಂಧ್ರಕೊರೆಯುವ ಏರ್ಪಾಡು ನಡೆದಿತ್ತು.  ಪ್ರಾಯೋಗಿಕ ರಂಧ್ರಕೊರೆತ ಪ್ರಾರಂಭವಾದದ್ದೂ ಉಂಟು.  ಯೋಜನೆಗೆ ತಗಲುತ್ತಿದ್ದ ಹೆಚ್ಚುವರಿ ವೆಚ್ಚದ ಸಲುವಾಗೂ ಅಂತರಿಕ್ಷ ಸಂಶೋಧನೆ ಮತ್ತು ವಿಯೆಟ್ನಾಂ ಯುದ್ಧಗಳ ಸಲುವಾಗೂ ಈ ಯೋಜನೆಯನ್ನೂ ಕೈಬಿಡಲಾಯಿತು (1966).

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ